Sunday, 15 January 2017

ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                   ಈಗ ಹೇಗೋ ಗೊತ್ತಿಲ್ಲ. ನಾನು ಪಿಎಚ್ ಡಿ ಪೂರ್ಣಗೊಳಿಸಿದ ಸಂದರ್ಭದಲ್ಲಿಪುಸ್ತಕ ಪ್ರಕಾಶನಕ್ಕೆ ಅನುಮತಿ ಕೇಳಿದಾಗ ಮೌಲ್ಯಮಾಪನ ವರದಿಗಳನ್ನೂ ಮೈಸೂರು ವಿಶ್ವ ವಿದ್ಯಾಲಯದವರು ನನಗೆ ನೀಡಿದರು. ಒಬ್ಬರು ಮೌಲ್ಯಮಾಪಕರಂತೂ ನನ್ನ ಮಾ್ಗದರ್ಶಕರಾಗಿದ್ದ ಡಾ ಎಡ್ವರ್ಡ್ ನೊರೋನಾ ಅವರೇ. ಹೊರಗಿನ ವಿಶ್ವವಿದ್ಯಾಲಯಗಳಿಂದ ಇನ್ನಿಬ್ಬರು ಕನ್ನಡದ ಖ್ಯಾತ ನಾಮರು: ಒಬ್ಬರು ಹಂಪನಾ ಮತ್ತು ಇನ್ನೊಬ್ಬರು ಪಾ ಶ ಶ್ರೀನಿವಾಸ (ಮದ್ರಾಸು ವಿಶ್ವವಿದ್ಯಾಲಯ).
                       
                     ನೊರೋನಾ ಇವರು ನನಗೆ ಪರಿಶ್ರಮದ ಪ್ರಾಮುಖ್ಯವನ್ನೂ, ಪ್ರಬಂಧದಲ್ಲಿ ವಸ್ತುವನ್ನು ವ್ಯವಸ್ಥಿತವಾಗಿಡುವ ವಿಧಿವಿಧಾನಗಳನ್ನೂ, ಪದ-ವಾಕ್ಯ- ಅಕ್ಷರಗಳು ಹೆಚ್ಚುವರಿಯಾಗಿರದಂತೆ ನೋಡಿಕೊಂಡು ನಿರೂಪಣೆಯನ್ನು ಸಂಕ್ಷಿಪ್ತ ಮತ್ತು ನಿಖರವಾಗಿಸುವ ರೀತಿಗಳನ್ನೂ - ಇಂತಹ ಹಲವಾರು ವಿಷಯಗಳನ್ನು ತಿಳಿಸಿದವರು ಮತ್ತು ನನ್ನ ಕೆಲಸವನ್ನೂ ಮೆಚ್ಚಿಕೊಂಡವರು; ತಮ್ಮ ಅಂತಿಮ ವರದಿಯಲ್ಲಿ ಕೂಡ ಇಂತಹ ಮೆಚ್ಚುಗೆಯನ್ನು ಹರಿಸಿದವರು.

                      ಘಟಾನುಘಟಿಯಾದ ಹಂಪನಾ, ನನ್ನಂತಹ ಕಿರಿಯ ಆರಂಭಿಕನ ಬಗ್ಗೆ ಏನು ಹೇಳಿರಬಹುದೋ ಎಂಬ ಆತಂಕ ಕಾಡುತ್ತಲೇ ಇತ್ತು. ಓದಿದಾಗ ಅವರು ಬರೆಹ ಆಶ್ಚರ್ಯವನ್ನೇ ತಂದಿತ್ತು. ಅವರ ವರದಿಯಲ್ಲಿ ಹೀಗೆ ಬರೆದಿದ್ದಾರೆ: "ಕನ್ನಡ ಭಾಷಾ ಸಾಹಿತ್ಯದ ಸಂದರ್ಭದಲ್ಲಿ ಮಿಶನರಿಗಳ ಪರಿಶ್ರಮ ಮತ್ತು ಕೊಡುಗೆಯನ್ನು ಕೇಂದ್ರ ಪ್ರಜ್ಞೆಯಾಗಿರಿಸಿ ಬಿ ವಿ ಮಹೀದಾಸ ಅವರು ಈ ನಿಬಂಧವನ್ನು ಸಿದ್ಧಪಡಿಸಿದ್ದಾರೆ. ಇದು ಬಹು ಶ್ರಮ ಸಾಧ್ಯವಾದ ಕೆಲಸ. ನಿಬಂಧಕಾರರು ಪಟ್ಟಿರುವ ಪರಿಶ್ರಮದ ಅಗಾಧತೆಯನ್ನು ಈ ಗ್ರಂಥದುದ್ದಕ್ಕೂ ಸಾದ್ಯಂತವಾಗಿ ನೋಡಬಹುದು. ಶ್ರದ್ಧಾಪೂರ್ಣವಾದ ಈ ಕಾಯಕದಲ್ಲಿ ಶಾಸ್ತ್ರಶುದ್ಧಿಯೂ ಇದೆ. ಅಧ್ಯಾಯಗಳ ವಿಂಗಡಣೆ, ಆಯಾ ಅಧ್ಯಾದಲ್ಲಿ ಅಳವಡಿಸಿರುವ ವಿಷಯ ಮತ್ತು ವಿವೇಚನೆ, ಪೂರಕ ಸಾಮಗ್ರಿಯ ಪರಿಷ್ಕಾರ, ಮೂಲ ಆಕರಗಳ ಶೋಧನೆ ಮತ್ತು ಸಮೀಕ್ಷೆ -  ಈ ಎಲ್ಲ ಅಂಶಗಳಲ್ಲೂ ನಿಬಂಧಕಾರರ ಪ್ರಾಮಾಣಿಕತೆ, ಪರಿಶೀಲನಾಪ್ರಜ್ಞೆ, ವಸ್ತುನಿಷ್ಠ ಮತ್ತು ಕೃತಿನಿಷ್ಠ ಅಧ್ಯಯನ ವಿಧಾನಕ್ಕೆ ಬದ್ಧವಾದ ನಿಲುವು - ಇವು ಎದ್ದು ಕಾಣುತ್ತವೆ. ಎಲ್ಲೂ ಗೊಂದಲಗಳಿಗೆ ಅವಕಾಶವಿರದಂತೆ ಪ್ರತಿಯೊಂದು ಅಧ್ಯಾಯವೂ ಅಲ್ಲಲ್ಲಿ ಬರಬೇಕಾದ ಮಾಹಿತಿಗಳನ್ನು ಗರ್ಭೀಕರಿಸಿಕೊಂಡು ತನಗೆ ತಾನು ತನಿಯಾಗಿ ನಿಲ್ಲುವಷ್ಟು ಸಮರ್ಪಕವಾಗಿದೆ. ಒಂದು ಶಾಸ್ತ್ರಕೃತಿಗೆ ಇರಬೇಕಾದ ಅಚ್ಚುಕಟ್ಟಾದ ನಿರಲಂಕೃತ ಶೈಲಿಯಿಂದ ನಿಬಂಧ ಸಂತೋಷ ಕೊಡುತ್ತದೆ. ಕ್ರೈಸ್ತ ಮಿಶನರಿಗಳು, ಎರಡು ಶತಮಾನದ ಕಾಲಘಟ್ಟದಲ್ಲಿ, ಕನ್ನಡ ಭಾಷೆಗೂ ಸಾಹಿತ್ಯಕ್ಕೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಷ್ಟೆಷ್ಟು ಬಗೆಯಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಹದುಪಕರಿಸಿದ್ದಾರೆಂಬುದನ್ನು ಬಿಂಬಿಸಲು ಈ ನಿಬಂಧ ದಿವ್ಯಮಣಿದರ್ಪಣವಾಗಿ ನಿಲ್ಲುತ್ತದೆ. ಒಂದು ನವೀನ ಶೈಕ್ಷಣಿಕ ಶಿಸ್ತನ್ನೂ, ಹೊಸ ಪರಿಭಾಷೆಯನ್ನೂ, ಮುಖ್ಯವಾಗಿ ಹಳಗನ್ನಡ ಕೃತಿಗಳ ಅನುಸಂಧಾನ ಕ್ರಮವನ್ನು ಸುವ್ಯವಸ್ಥಿತವಾಗಿ ಸಂಯೋಜಿಸಿ ಮುಂದೆ ಬರೆಯಬೇಕಾಗಿದ್ದ ಸಾಹಿತ್ಯಚರಿತ್ರಗೆ ತಕ್ಕ ಭೂಮಿಕೆಯನ್ನು ಸಿದ್ಧಪಡಿಸಿಕೊಟ್ಟವರು ಕ್ರೈಸ್ತಮಿಶನರಿಗಳೆಂಬುದನ್ನು ಈ ನಿಬಂಧವು ಘನತರವಾಗಿ ಖಚಿತಪಡಿಸಿದೆ. ಇದು, ವಿದ್ವತ್ಕಾರ್ಯ ತಾಳ್ಮೆಯ ಹಾಗೂ ನಿರಂತರ ದುಡಿಮೆಯ ಸಾರವಾಗಿ ಬಂದಿರುವ ನಿಬಂಧ. ನಿಜಕ್ಕೂ ಶಬ್ದದ ಪೂರ್ಣಾರ್ಥದಲ್ಲಿ ಇದು ಉತ್ತಮ ಮಟ್ಟದ 'ಸಂಶೋಧನ' ಗ್ರಂಥ".
                      ಸನ್ಮಾನ್ಯರ ಈ ಮಾತಗಳು ನನಗೂ ನನ್ನ ಮಾರ್ಗದರ್ಶಕರಾದ ನೊರೋನಾರಿಗೂ ಹೊಗಳಿಕೆಯ ಉಡುಗೊರೆಗಳೇ ಸರಿ!. ನನ್ನ ನಿಬಂಧದಲ್ಲಿ ಹಂಪನಾ ಇವರು ಹೇಳಿದ ಗುಣಗಳೆಲ್ಲ ಸೇರುವಂತೆ ಮಾಡಿದವರು ನೊರೋನಾ ಇವರಲ್ಲದೆ ಬೇರಾರು? ಹೀಗೆ ಸಮನ್ವಯಗೊಳಿಸಿ ಇಬ್ಬರನ್ನೂ ಉತ್ತಮ ಕೆಲಸಕ್ಕೆ ಪ್ರೇರಿಸುವ ಕಲಾಗಾರಿಕೆಯನ್ನು ಕಂಡು ಬೆರಗಾಗುತ್ತದೆ. ನನ್ನಂತೂ ನಾಗರಾಜಯ್ಯನವರ ಮಾತುಗಳು ಇಂದಿಗೂ ಉಬ್ಬಿಸುತ್ತವೆ. ಶೈಕ್ಷಣಿಕ ಆಡಳಿತದ ನಡುವೆ ಶಿಕ್ಷಣ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಲ್ಪವಾದರೂ ಕೃಷಿ ಮಾಡಲು ಪ್ರೇರಿಸಿದವು ಇಂತಹ ಮಾತುಗಳೇ!.

                      ಪಾ ಶ ಶ್ರೀನಿವಾಸರು ನನ್ನ ನಿಬಂಧವನ್ನು ವಿವರವಾಗಿ ಪರಿಶೀಲಿಸಿ ದಾಖಲಿಸಿದ್ದಾರೆ. ಗುಣಾವಗುಣಗಳನ್ನು ಚರ್ಚಿಸಿದ್ದಾರೆ. "ಪಾಶ್ಚಾತ್ಯ ಮಿಶನರಿಗಳ ಕೆಲಸವನ್ನು ಪರಿಚಯ ಮಾಡಿಕೊಡುವ ಹಲವಾರು ಗ್ರಂಥಗಳು ರಚನೆಯಾಗಿದ್ದರೂ ವರ್ಣನಾತ್ಮಕ ಮತ್ತು ಚಾರಿತ್ರಿಕ ದೃಷ್ಟಿಯಿಂದ, ವಸ್ತುನಿಷ್ಠವಾಗಿ ಇಷ್ಟೊಂದು ವಿವರವಾಗಿ ಪರಿಚಯಿಸುವ ಕೃತಿ ಹೊರಬಂದಿರುವುದು ಇದೇ ಮೊದಲು. ಅದರಲ್ಲೂ ಶಾಸ್ತ್ರ ಕೃತಿಗಳ ರಚನೆಯಲ್ಲಿ ಅವರು ತೋರಿರುವ ಅನುಪಮ ಕೌಶಲವನ್ನೂ, ಪ್ರಾಯೋಗಿಕ ವಿಮರ್ಶೆಯ ರೂಪದಲ್ಲಿ [ಬಿಡಿಸಿಬಿಡಿಸಿ] ಪರಿಚಯಿಸಿರುವ, ನಿಬಂಧಕಾರರ ಶ್ರಮದಿಂದ ಕೂಡಿದ ಈ ಕಾರ್ಯ ಶ್ಲಘನೀಯವಾಗಿದೆ. ಇಷ್ಟೊಂದು ದೀರ್ಘವಾದ, ವಿಸ್ತಾರವಾದ, ನಿಬಂಧದಲ್ಲಿಹೆಚ್ಚಾಗಿ, ಬೆರಳಚ್ಚಿನ ದೋಷಗಳಾಗಲೀ ಪದವಾಕ್ಯ ದೋಷಗಳಾಗಲೀ ನುಸುಳದಿರುವುದು ಮೆಚ್ಚತಕ್ಕ ಅಂಶ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

                         ಈ ಮೂರೂ ಮಹನೀಯರುಗಳು ನನ್ನ ಸಾಹಿತ್ಯಾಭಿವ್ಯಕ್ತಿಗೆ ಪ್ರೇರಣೆ ನೀಡಿದವು; ಅಭಿವ್ಯಕ್ತಿಯನ್ನು ಮೊನಚುಗೊಳಿಸಿದವು; ಅನಾವಶ್ಯಕ ಪದಗಳಿಲ್ಲದಂತೆ ಅರ್ಥಪೂರ್ಣ ಬರಹಕ್ಕೆ ನನ್ನನ್ನು ನೂಕಿದವು. ಈ ವಿಚಾರಗಳಲ್ಲಿ ನನಗೆ ವ್ಯಕ್ತಿತ್ವವೊಂದು ಒದಗಿ ಬಂದುದು ಇವರಿಂದಿಲೇ ಅಲ್ಲವೇ?

                      

Tuesday, 15 March 2016

ಹೊಟ್ಟುಕುಟ್ಟುವ ಆಟ

                                        
                                             ಹೊಟ್ಟುಕುಟ್ಟುವ  ಆಟ


ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಗುಲ್ಲು ಏರಿ ಅನೇಕರು ಅಸಹಿಷ್ಣುತೆ ಇದೆ, ಇಲ್ಲ; ಅದಕ್ಕೆ ಕಾರಣ ಅದು, ಇದು; ಇದನ್ನು ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು; ಕೈಗೊಳ್ಳುತ್ತಿಲ್ಲ, ಅದಕ್ಕಾಗಿ ಹೋರಾಟ ಮಾಡಬೇಕು ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಇಂತಹ ಚರ್ಚೆಗಳಲ್ಲಿ ಭಾಗೀದಾರರೊಬ್ಬರು ತರುಣ ಮಿತ್ರ ಗಿರೀಶಭಟ್ಟರು. ಅವರಲ್ಲಿ ನನ್ನ ಅನಿಸಿಕೆಗಳ ಅರಿಕೆ ಇಲ್ಲಿದೆ:

            ನನಗಂತೂ ಈ ಅಸಹಿಷ್ಣುತೆ ಚರ್ಚೆಗಳೆಲ್ಲ ಹೊಟ್ಟು ಕುಟ್ಟುವ ಅನುಭವ ಕೊಡುತ್ತವೆ. ನನಗೆ ಕಟ್ಟಾ ಸಂಪ್ರದಾಯಸ್ಥರಾದ ಮಸ್ಲಿಮರೂ ಕ್ರೈಸ್ತರೂ ಸ್ನೇಹಿತರಿದ್ದಾರೆ. ಅವರು ಐದು ಸಲ ನಮಾಜು ಮಾಡುವ ಮುಸ್ಲಿಮರು ಮತ್ತು ಪಾದ್ರಿತನದಲ್ಲಿರುವ ಕ್ರೈಸ್ತರು. ನಾನೂ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣನೇ. ‘ವಾದಿ’ ಎನ್ನಲ್ಲ. ಏಕೆಂದರೆ ‘ಅದು ಅಲ್ಲಿಯೇ; ಇದು ಇಲ್ಲಿಯೇ’ ಎಂಬುದನ್ನು ನಾನು ಮನಸಾರೆ ಒಪ್ಪುವೆ.
            ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿಕೊಂಡು ಈ ಬಗ್ಗೆ ಆಗುತ್ತಿರುವ ಚರ್ಚೆ, ಪ್ರಚಾರ, ವಾದಗಳೆಲ್ಲ ಶುದ್ಧ ರಾಜಕೀಯವೆಂದೇ ನನಗನ್ನಿಸುತ್ತದೆ. ಕನ್ನಯ್ಯ, ವೇಮುಲ – ಇವರಿಗೆಲ್ಲ ರಾಹುಲ್ ಗಾಂಧಿಯವರು ಆಯಾ ಸ್ಥಳಕ್ಕೇ ಹೋಗಿ ಸಾಂತ್ವನ ಹೇಳಿ ಬೆಂಬಲ ಸೂಚಿಸಿದರಷ್ಟೆ.ಈಗ ಕನ್ನಯ್ಯ ಕುಮಾರ ಹೇಳಿಕೆ ಕೊಡುತ್ತಾ ಹೋದಂತೆ ರಾಹುಲ್ ಗಾಂಧಿ ಬೆಂಬಲ ಕಾಣೆಯಾಗುತ್ತಿದೆಯಲ್ಲ? ಕನ್ನಯ್ಯ ಮಾಡಿದ್ದೂ ತಾನು ನಾಯಕನಾಗಬೇಕೆಂಬ ಹಪಿಹಪಿಯಿಂದ. ಅವನು ರಾಜಕೀಯ ನಾಯಕನ ಸ್ಥಾನಮಾನ ಗಳಿಸುತ್ತಿದ್ದಾನೆಂದು ಕಾಣುವ ಮೊದಲು ರಾಹುಲ್ ಬೆಂಬಲ. ಅಂತಹ ಸಾಧ್ಯತೆ ನಿಚ್ಚಳವಾಗುತ್ತಿದ್ದಂತೆ ನೋ ಬೆಂಬಲ. ಇಲ್ಲೆಲ್ಲ ರಾಜಕೀಯ ಸ್ವಾರ್ಥ ವಿಚಾರ ಧಾರೆಯ ಮುಖವಾಡ ಧರಿಸುತ್ತದೆ. ಆದ್ದರಿಂದಲೇ ಚುನಾವಣೆ ಬಂದಾಗ ಅಭಿವೃದ್ಧಿಯ ಐಡಿಯಾಗಳು, ಅಭಿವೃದ್ಧಿ ಸಾಧಿಸುವರೆಂಬ ವಿಶ್ವಾಸ ಮುಖ್ಯವಾಗುತ್ತವೆ. ಕೊನೆಯ ಪಕ್ಷ ಕಳೆದ ಚುನಾವಣೆಯಲ್ಲಿ ಹಾಗಾಗಿದೆ.

             ಮಾರ್ಕ್ಸ್-ವಾದವೆಂಬ ಮರೀಚಿಕೆಯ ಬೆನ್ನು ಹತ್ತಿದ ರಾಷ್ಟ್ರಗಳು ಉದುರಿರುವುದು ಇತಿಹಾಸ. ಚೀಣಾದ  ಮಾವೋವಾದ ಕೂಡ ಮಾರ್ಕ್ಸ್-ವಾದದ ಒಂದು ರೂಪವಾಗಿದ್ದು ಪುನರುತ್ಥಾನ ಅನುಭವಿಸಿ ಮೊದಲಿನ ತೀವ್ರತೆಯಿಂದ ದೂರವಾಗಿದೆಯೆಂದೆನಿಸುತ್ತದೆ. ತಾವೇನೋ ಶ್ರಮಿಕರ ಹಿತ ಕಾಯುವ ವಿಶ್ವವಾದಿಗಳೆಂದುಕೊಳ್ಳುವ ಈ ವಾದದ ಮೂರು ಅವತರಣಿಕೆಗಳು ನಮ್ಮ ದೇಶದಲ್ಲಿವೆ. ಮೂರು ಅವತರಣಿಕೆಗಳು ನಾಯಕಕೇಂದ್ರಿತವಾಗಿ ಹಟ್ಟಿಕೊಂಡವು ತಾನೆ. ಇದಕ್ಕೆ ವಿರೋಧವಾಗಿ ಎಲ್ಲರ ಹಿತದ ಮೂಲಕ ರಾಷ್ಟ್ರಹಿತಕ್ಕೆ ಬದ್ಧವಾಗಿರುವುದು ಬಿಜೆಪಿ. ಕೆಲವೊಮ್ಮೆ ಇದೆ ನಾಯಕರು ತಾವು ಇಂದೂ ವಾದಿಗಳೆಂದು ಘೋಷಿಸಿಕೊಂಡರೂ ಹಿಂದೂ ಎಂಬುದರ ವ್ಯಾಖ್ಯೆಗೆ ತೊಡಗಿದಾಗ ಇವರುಗಳು ನೀಡುವ ವಿವರಣೆ ಈ ದೇಶದಲ್ಲಿರುವ ೆಲ್ಲರೂ ಎಂಬುದೇ. ಈ ಎರಡು ಪಕ್ಷಗಳ ನಡುವೆ ಅಸಹಿಷ್ಣುತೆ ಸಹಜವೇ. ಏಕೆಂದರೆ ಅದು ಒಂದು ವರ್ಗVsಎಲ್ಲರು. ಭಾರತದಲ್ಲಿರುವ ಇನ್ನೊಂದಷ್ಟು ಪಕ್ಷಗಳು ವಂಶಾಧಾರಿತ. ನಿಜವಾಗಿ ಇಲ್ಲದ ಅಸಹಿಷ್ಣುತೆ ಹುಟ್ಟುಹಾಕುವವರು ಇವರೇ. ಇವರ ವಂಶಕುಡಿಗಳು ಅಧಿಕಾರ ಹಿಡಿಯುವುದಷ್ಟೆ ಇವರಿಗೆ ಬೇಕಾದ್ದು. ಆದ್ದರಿಂದಲೇ ಅಸಹಿಷ್ಣುತೆ ಒಂದು ರಾಜಕೀಯ ಪ್ರಚಾರ – ಈಗ ಅಧಿಕಾರದಲ್ಲಿರುವರ ಬಗ್ಗೆ ಜನರಲ್ಲಿ ಅಸಹನೆ ಉಂಟಾಗುವಂತೆ ಮಾಡಲು. ಇದಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಇದಕ್ಕೆ ನೀಡುವ ಅಗತ್ಯವಿಲ್ಲವೆಂದು ನನ್ನ ಭಾವನೆ.

Wednesday, 20 January 2016

ಹೈದರಾಬಾದು ವಿಶ್ವವಿದ್ಯಾಲಯದ ದರ್ಘಟನೆ

                     ಹೈದರಾಬಾದು ವಿಶ್ವವಿದ್ಯಾಲಯದ ದರ್ಘಟನೆ


                   ಎರಡು ದಿನಗಳ ಹಿಂದೆ ಹೈದರಾಬಾದು ವಿಶ್ವವಿದ್ಯಾಲಯದ ಆವರಣದಲ್ಲಿ ದುರ್ಘಟನೆಯೊಂದು ನಡೆದು ಹೋಯಿತು. ಒಬ್ಬ ಪಿ ಎಚ್ಡಿ ವಿದ್ಯಾರ್ಥಿಯ ಆತ್ಮಹತ್ಯೆ ಎಂದರೆ ತುಂಬ ದುರದೃಷ್ಟಕರವೇ ಸರಿ. ಅವನ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ. ಇಂತಹ ಸೂಕ್ಷ್ಮ ಘಟನೆಯ್ನು ರಾಜಕೀಯಕ್ಕೆ ಬಳಸಿಕಳ್ಳುತ್ತಿರುವುದು ಅವಮಾನಕರ. ಅದೂ ಜನಮಾನಸವನ್ನು ಉದ್ವೇಗಗೊಳ್ಳುವಂತೆ ಪ್ರಚೋದಿಸುವ ಮೂಲಕ.  ಹೀಗಾಗದಿರಲಿ. ರಾಕೀಯಸ್ಥರು ರಾಷ್ಟ್ರದ ರಾಜ್ಯದ ಅಭಿವೃದ್ಧಿಕನಸುಗಳ ಬಗ್ಗೆ ಕ್ರಿಯಾಶೀಲರಾಗಲಿ. ವಿಶ್ವವಿದ್ಯಾಲಯದ ಸಮಾಲೋಚನ ವಿಭಾಗ ಸಮಸ್ಯೆಗಲನ್ನು ಗುರುತಿಸಿ ಸೂಕ್ತ ಸಲಹೆಗಳನ್ನು ಕೊಡುತ್ತಾ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು. ಸಮಾಲೋಚನ ವಿಭಾಗಿಲ್ಲದಿದ್ದರೆ ಅಂತಹ ವಿಭಾಗವೊಂದನ್ನು ತೆರೆಯುವುದು ತತ್ಕ್ಷಣದ ಅಗತ್ಯ.

Tuesday, 15 December 2015

ಪ್ರೀತಿಯ ಎಡ್ವರ್ಡ್ ನೊರೋನ್ಹಾ



                                                    ಪ್ರೀತಿಯ ಎಡ್ವರ್ಡ್ ನೊರೋನ್ಹಾ

                             ಏಕೋ ಈ ದಿನ ನೊರೋನ್ಹಾರ ನೆನಪು ತುಂಬ ಬಂತು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ನಾನು ಎಮ್ ಎ ಮಾಡುತ್ತಿದ್ದಾಗ ಎಡ್ವರ್ಡ್ ನೊರೋನ್ಹಾ ನನ್ನ ಸಹಪಾಠಿ. ನನಗಿಂತ ಆರು ವರ್ಷ ಹಿರಿಯರಾದರೂ ಉತ್ತಮ ಗೆಳೆಯ. ನಾನು ತುಂಬ ಸಂಪ್ರದಾಯಸ್ಥ ಬ್ರಾಹ್ಮಣ, ಅವರು ತುಂಬ ಸಂಪ್ರದಾಯಸ್ಥ ಕಥೋಲಿಕ. ಜೆಸೂಯಿಟ್ ಬ್ರದರ್ ಆಗಿದ್ದವರು. ನನ್ನ ವಾಸ್ತವ್ಯ ಮಂಗಳಾದೇವಿ ದೇವಸ್ಥಾನದ ಹಿಂದೆ ಇದ್ದ (ಈಗ ಪಾಯಿಂಗ್ ಗೆಸ್ಟ್ ಎನ್ನುವಂತಹ) ಮನೆಯಲ್ಲಿ, ಅವರದು ಸಂತ ಅಲಾಯ್ಶಿಯಸ್ ಚರ್ಚಿನಲ್ಲಿ. ನಾವು ಅಜಂತ, ಎಲ್ಲೋರಾ, ಮುಂಬೈಗಳಿಗೆ ಶೈಕ್ಷಣಿಕಪ್ರವಾಸ ಹೋದಾಗಲೂ ನಾವು ನಿಕಟ ಜೊತೆಗಾರರು. 1974ರಲ್ಲಿ ಬಹುಶಃ ನಾವು ಒಟ್ಟೊಟ್ಟಿಗೆ ಕೆಲಸ ಸೇರಿದೆವು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರು, ನಾನು ರಾಯಚೂರು ತಾಲ್ಲೂಕಿನ ಇಡಪನೂರಿನಲ್ಲಿ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ. ಅನಂತರ ನನ್ನುನ್ನು ಪಿ ಎಚ್ಡಿ ಮಾಡಲು ಪ್ರೇರೇಪಿಸಿದವರೂ ಅವರೇ, ಮಾರ್ಗದರ್ಶಿಸಿದವರೂ ಅವರೇ. ಶಾಸ್ತ್ರೀಯ ಪ್ರಬಂಧವೊಂದನ್ನು ಬರೆಯುವ ಕೌಶಲವನ್ನು ನಾನು ಅವರಿಂದ ಕಲಿತೆ. ನಾನು ಕನ್ಮನಡಕ್ಕೆ ಗೀತಾಂಜಲಿಯನ್ನು ಭಾಷಾಂತಿರಿಸಿದಾಗ ತುಂಬ ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿದವರು, ಅದಕ್ಕೆ ಮುನ್ನುಡಿಯ ತೋರಣ ಬರೆದವರು. ಮಹತ್ವಾಕಾಂಕ್ಷಿ.  ಸಜ್ಜನ. ದಾರ್ಮಿಕ ಮನೋಭಾವದ ವ್ಯಕ್ತಿ. ನಿವೃತ್ತಿಯನಂತರ ಕೊಂಕಣಿ ಪ್ರಾಜಕ್ಟೊಂದಕ್ಕಾಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂಬಂಧ ಒಂದು ಸಲ ಮಂಗಳೂರಿನಿಂದ ಮೈಸೂರಿಗೆ ಹಿಂದಿರುಗುತ್ತಿದ್ದಾಗ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದರು. ಅಕ್ಟೋಬರ್ 8, 2009ರಂದು ನಿಧನ.

Friday, 11 December 2015

ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ


                                  ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ

                      ವೇದಪ್ರಕಾಶ ಎಸ್ ಎಲ್ ಭೂರಪ್ಪನವರ ತಂತುವನ್ನು ತಂದು ಕೊಟ್ಟಿದ್ದರು. ಓದಿದೆ. ಈ ತಂತುವಿಗೆ ಹಲವು ಎಳೆಗಳು, ಹಲವು ಆಯಾಮಗಳು. ಇದರಲ್ಲಿ ಬಂದಿರುವುದು  ಮುಖ್ಯವಾಗಿ ಮೂರು ವಸ್ತುಗಳು. ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು. ಈ ಮೂರು ಎಳೆಗಳನ್ನು ಹೆಣೆದು ಸಿದ್ಧವಾಗಿದೆ ತಂತುವಿನ ಹರಹು. ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಸಂಗೀತಗಳೂ ಸೇರಿ ಸಿತಾರ್ ಸಿದ್ಧವಾಗುತ್ತದೆ.
                     ಒಂದು ದಶಕದ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಭ್ರಷ್ಟಾಚಾರದ ದಾವೆಯೊಂದರಲ್ಲಿಅಲಹಾಬಾದ್ ನ್ಯಾಯಾಲಯವು ಶ್ರೀಮತಿ ಇಂದಿರಾಗಾಂಧಿಯವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ಅವರನ್ನು ಲೋಕಸಭಾಸ್ಥಾನದಿಂದ ಹೊರಹಾಕಿದ್ದು ಕಾದಂಬರಿಯಲ್ಲಿ ಬರುವುದರಿಂದ ಕಥೆಗೆ ಒಂದು ರೀತಿಯ ಅಥೆಂಟಿಸಿಟಿ ಬಂದಿದೆ. ಅಭಿವೃದ್ಧಿ-ವಿಕಾಸಗಳೆಂಬ ಓಟದಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೆ ಏನನ್ನು ಗಳಿಸಿದ್ದೇವೆ ಎಂಬ ಚಿತ್ರಗಳೂ ಇಲ್ಲಿ ಮನಂಬುಗುತ್ತವೆ.
                           ವಿದ್ಯಾರ್ಥಿಗಳೇ ಮಣ್ಣಿನಿಂದ ಕಟ್ಟಿದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಹೊಸ ರೀತಿಯ ಶಿಲ್ವನ್ನ ಅಳವಡಿಸಿಕೊಂಡು, ಹೊಸ ಗಟ್ಟಿ ಸಾಮಗ್ರಿಗಳಿಂದ ವೈಭವಯುತವಾಗಿ ಮಾರ್ಪಡುತ್ತದೆ.ಆ  ಹಳ್ಳಿಯ ಮಕ್ಕಳೇ ಸೇರಿ ಕಲಿಯುತ್ತಿದ್ದ ತರಗತಿಗಳಲ್ಲಿ ಭಾರತಾದ್ಯಂತದಿಂದ ಶ್ರೀಮಂತ ಕುಟುಂಬಗಳ ಮಕ್ಕಳು ಬಂದು ಸೇರುತ್ತಾರೆ. ಬಯಸುವ ಅಧ್ಯಾಪಕರಿಗೆ ಕೈತುಂಬ ಸಂಬಳ ದರಕುತ್ತದೆ. ಪಾರಂಪರಿಕ ನೀತಿಯ ಚೌಕಟ್ಟು, ಪರಿಶ್ರಮದ ಬೆಲೆ, ಒಟ್ಟಾಗಿ ಇದ್ದುದನ್ನೇ ಹಂಚಿಕೊಂಡು ತಿನ್ನುವ ಸಮುದಾಯ ಭಾವ ಕ:ಳೆದು ಹೋಗುತ್ತವೆ. ಹೊಸ ರಾಜಕೀಯ ವ್ಯವಸ್ಥೆ, ನಾಯಕರಿಗೆ ಸೌಲಭ್ಯ ಗಳ ಸುರಿಮಳೆ ಇರುವ ಜೀವನ, ಅಂತಹವರಿಗೆ ಉದ್ದಾಮತೆಯ ಹೆಸರು ಎಲ್ಲ ಸಿಗುತ್ತವೆ. ಕಷ್ಟಪಟ್ಟು ದುಡಿದೇ ತಿನ್ಬೇಕೆಂಬ ಛಲ. ಇನ್ನೊಬ್ಬರನ್ನು ಶೋಷಿಸಬಾರದೆಂಬ ವ್ರತ, ಸಮಾಜಕ್ಕಾಗಿ ತನ್ನ ದುಡಿಮೆಯೆಲ್ಲವನ್ನಾದರೂ ನೀಡಿ ಸಹವರ್ತಿಗಳ ಬಾಳು ಹಸನಾಗುವಂತೆ ಮಾಡಬೇಕೆಂಬ ಕಳಕಳಿ ನಷ್ಟವಾಗಿದೆ. ಲೈಂಗಿಕತೆಯೂ ಇತರ ಆವಶ್ಯಕತೆಗಳಂತೆಯೇ ಇನ್ನೊಂದು ಆವಶ್ಯಕತೆ ಎಂದು ಭಾವಿಸಿ ಸ್ವಚ್ಛಂದ ಲೈಂಗಿಕ ಸಂಬಂಧಗಳ ಹೊಸ ಜೀವನ ಪ್ರಾರಂಭವಾಗುತ್ತದೆ. ಮನೋನೆಮ್ಮದಿ, ಕೌಟುಂಬಿಕ ಸಂತೋಷ ಮತ್ತು ಮುಂದಿನ ಪೀಲೀಗೆಗೆ ಕುಟುಂಬವ್ಯವಹಾರಗಳ ನೆಲೆಗಟ್ಟು ಇಲ್ಲವಾಗುತ್ತದೆ.
                                 ಮೇಲನವುಗಳನ್ನೆಲ್ಲ ಒಂದೊಂದೇ ಪಾತ್ರದಲ್ಲಿ ಗುರತಿಸಿಯೂ ಕಾಣಬಹುದು ಒಟ್ಟಾಗಿ ಕಾದಂಬರಿಯಲ್ಲಿ ವಿವಿಧ ಪಾತ್ರಗಳ  ಒಡನಾಟದಲ್ಲಿಯೂ ಗುರುತಿಸಬಹುದು. ಇದು ಕಾದಂಬರಿಯ ವೈಶಿಷ್ಟ್ಯ.

ಅಭಿನವಗುಪ್ತನ ಗೀತಾರ್ಥಸಂಗ್ರಹ



                                           ಅಭಿನವಗುಪ್ತನ ಗೀತಾರ್ಥಸಂಗ್ರಹ

                    ನಾವು ಎಮ್ ಎ ಓದುತ್ತಿದ್ದಾಗ ಅಭಿನವಗುಪ್ತನ ಹೆಸರನ್ನು ನಾವು ಭಾರತೀಯ ಕಾವ್ಯ ಮೀಮಾಂಸೆಯ ಸಂದರ್ಭದಲ್ಲಿ ಓದುತ್ತಿದ್ದೆವು. ಧ್ವನಿಪ್ರಸ್ಥಾನದ ಪ್ರಮುಖ ವಿದ್ವಾಂಸನಾಗಿ ನಮಗೆ ಈತನ ಪರಿಚಯ. ಆನಂದ  ವರ್ಧನ ಧ್ವನಿಯ ಬಗ್ಗೆ ಶಕ್ತವಾಗಿ ಪ್ರತಿಪಾದಿಸಿರಬಹುದು. "ಕಾವ್ಯಸ್ಯಾತ್ಮಾ ಧ್ವನಿಃ" ಎಂದು ಮುಕ್ತವಾಗಿ ಘೋಷಿಸಿರಬಹುದು. ಆದರೆ ಧ್ವನಿಪ್ರಸ್ಥಾನಕ್ಕೆ ಗಟ್ಟಿ ನೆಲೆ ದೊರಕಿದ್ದು ಅಭಿನವಗುಪ್ತನ ವ್ಯಾಖ್ಯಾನ ಧ್ವನ್ಯಾಲೋಕಲೋಚನದಿಂದ. ಹಾಗೆಂದು ನಮ್ಮ ಪ್ರೊಫೆಸರರು ಹೇಳಿದ್ದು ನೆನಪಾಗುತ್ತದೆ. ಅವನು ಕಾಶ್ಮೀರಿ ಎಂದೂ ಅದ್ವೈತಾನುಭವದ ವ್ಯಕ್ತಿಯೆಂದೂ ಹೇಳಿದ್ದರು.
                   ಇವನು ಭಗವದ್ಗೀತೆಗೆ ಒಂದು ವ್ಯಾಖ್ಯಾನ ಬರೆದಿರುವನೆಂಬುದು 'ಚಿಂತನ ಬಯಲು'ವಿನಲ್ಲಿ ಶ್ರೀ ಚೈತನ್ಯ ಎಂಬುವರು ಬರೆದ ಲೇಖನದಿಂದ ತಿಳಿಯಿತು. ಅಥವ ನೆನಪು ಮರುಕಳಿಸಿತೆ? ತಾವಲ್ಲ ಇಂದ್ರಿಯಗಳು ಅನುಭವಿಸುವುವು ಎಂಬ ಅನುಸಂಧಾನದಿಂದ ಆಯಾ ಕರಣಗಳ ಅಭೀಪ್ಸೆಗಳನ್ನು ಪೂರೈಸಲು ಬಿಡುವುದರಿಂದ  ಕರಣದೇವತೆಗಳು ತೃಪ್ತರಾಗುವರು. ಇದರಿಂದ ಇಂತಹ ಆಸಗಳಿಂದ ಆತ್ಮ ಮುಕ್ತನಾಗುವನು. " by abandoning nothing will happen, by enjoying everything will happen. Enjoying you will be detached". ಇದೊಂದು ವಿಭಿನ್ನವಾದ ಅರ್ಥೈಸುವ ವಿಧಾನವಾಗಿದೆ.
                       ಕೊನೆಯಲ್ಲಿ ಸಂಗ್ರಹ ರೂಪವಾಗಿ ಹದಿನೆಂಟು ಅಧ್ಯಾಯಗಳನ್ನು ಹದಿನೆಂಟು ಶ್ಲೋಕಗಳಲ್ಲಿ ಸಂಕ್ಷೇಪಗೊಳಿಸಿಕೊಟ್ಟಿರುವುದು ಗೀತಾರ್ಥವನ್ನು ಅನುದಿನ ಮನ ಮಾಡಿಕಳ್ಳಬೇಕೆನ್ನುವವರಿಗೆ ತುಂಬ ಅನುಕೂಲಕರವಾದ ಸುಧಾರಣೆ.

Friday, 27 November 2015

ಅಸಹನೆ ಹೀಗೊಂದು ಅಭಿಪ್ರಾಯ

                     


                                          ಅಸಹಿಷ್ಣತೆಯ ಬಗ್ಗೆ ಹೀಗೊಂದು ಅಭಿಪ್ರಾಯ

                                    26-11-2015ರಂದು ಶ್ರೀಮತಿ ಸೋನಿಯಾ ಗಾಂಧಿ ಇವರು ಲೋಕಸಭೆಯ ತಮ್ಮ ಭಾಷಣದಲ್ಲಿ ಸರಕಾರದ ಮೇಲೆ ಸಂವಿಧಾನವನ್ನು ಅಪಹರಿಸಿದ ಆಪಾದನೆ ಹೊರಿಸಿದ್ದಾರೆ.ಇದು ಸರಕಾರ ಸಂವಿಧಾನದಿವಸವನ್ನು ಆಚರಿಸುತ್ತಿದ್ದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸರದಾರ್ ಪಟೇಲರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಾರದೆಂದು ಮೋದಿಯವರಿಗೆ ಸಲಹೆ ನೀಡಿದ್ದರು. ಮಹಾತ್ಮ ಗಾಂಧಿಯವರ ಹೆಸರನ್ನು ಬಿಜೆಪಿಯವರು ಉಲ್ಲೇಖಿಸಿದಾಗಲೆಲ್ಲ ಕಾಂಗ್ರೆಸ್ಸಿನವರು ಗಾಂಧಿ ಕೊಲೆಗೆ ಕಾರಣರಾದವರು ಅವರ ಹೆಸರನ್ನು ಹೇಳುವುದಕ್ಕೂ ಅರ್ಹರಲ್ಲವೆಂದು ಹೇಳುವುದು ಮಾಮೂಲಿಯೇ ಆಗಿಬಿಟ್ಟಿದೆ. ಗಾಂಧಿಕೊಲೆಗೆ ರಾಸ್ವಸೇ ಆಗಲೀ ಅಂದಿನ ಜನಸಂಘವಾಗಲೀ ಕಾರಣವಲ್ಲವೆಂದು ನ್ಯಾಯಾಲಯಗಳೇ ತೀರ್ಪಿಸಿದ ಮೇಲೂ. ಇವೆಲ್ಲ ಒಂದು ಅಂಶವನ್ನು ಎತ್ತಿ ತೋರಿಸುತ್ತವೆ: ಭಾರತದಲ್ಲಿ ಒಳ್ಳೆಯದೇನುಂಟೋ ಅದಕ್ಕೆಲ್ಲ ತಾವೇ ಒಡೆಯರೆಂದು ಕೆಲವರು ಮಾಡಿಕೊಂಡು ಬಿಟ್ಟಿದ್ದಾರೆ. ಬೇರೆಯವರು ಒಳ್ಳೆಯವರಿದ್ದಾರೆ, ಒಳ್ಳೆಯ ಕೆಲಸ ಮಾಡತ್ತಿದ್ದಾರೆ ಎಂದಾದರೆ ಅದು ಅವರು ಮಾಡುತ್ತಿರುವುದಲ್ಲ ಅದನ್ನು ಮಾಡುತ್ತಿರುವವರು ತಮ್ಮ ಕಡೆಯವರೇ, ಅದಕ್ಕೆ ವಿರುದ್ಧವದುದನ್ನೇನ್ನೊ  ಮೊದಲಿನವರು  ಮಾಡುತ್ತಿದ್ದಾರೆ ಎಂದು ತೋರಿಸಲು ಕಷ್ಟಪಡುವುದು ಇವರಿಗೆ ಹೀಗೆ ಸಹಜ. ಅದರ ಪರಿಣಾಮವೇ ಅಸಹಿಷ್ಣುತೆಯ ದೊಡ್ಡ ಪ್ರಚಾರ ಎನಿಸುತ್ತದೆ.
                                ನಾವು ಅಸಹನೆ ತೋರಲೇ ಬೇಕಾದ ಹಲವು ಐಟಮ್ಮುಗಳಿವೆ. ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಭ್ರಷ್ಟಾಚಾರ, ಸೌಲಭ್ಯಗಳು ಸಾಮಾನ್ಯನಿಗೆ ಎಟುಕದಿರುವ ವಾತಾವರಣ, ಇಷ್ಟೆಲ್ಲ ಪ್ರಚಾರದನಂತರವೂ ಹರಡದ ಸ್ವಚ್ಛತೆ, ಇತ್ಯಾದಿ. ಇವುಗಳ ವಿರುದ್ಧ ಅಸಹನಾ ಆಂದೋಲನ ಮಾಡುವುದಲ್ಲ. ರಚನಾತ್ಮಕವಾಗಿ ಇವುಗಳ ಸಾಧನೆಗೆ ತಮ್ಮ ಕೈಲಾದುದನ್ನು ಮಾಡುವುದು. ಈ ಕಡೆಗೆ ಎಲ್ಲರ ಗಮನ ಹರಿಯಲೆಂದು ಹಾರೈಸುವೆ.