Thursday, 20 January 2022

ನಮ್ಮೆಲ್ಲರ ಪ್ರೀತಿಪಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗ ಗೆಳೆಯ ಓಂಕಾರನ ಬರಹ

 

ಓಂಕಾರ ಹೇಳುತ್ತಾರೆ

"ಧಾರ್ಮಿಕವಾಗಿ ಮೋದಿ ಬಗ್ಗೆ ಹೇಳುವುದಾದರೆ, ಅವನೊಬ್ಬ ದೇಶಭಕ್ತ. ದೇಶವನ್ನು ಕಾಪಾಡಲು ಬಂದ ಸತ್ಪುರುಷ. ಮೋದಿಯಂತೆ ಇರುವವರು ಮೋದಿಯೊಬ್ಬನೆ. ಅವನಂತೆ ಬೇರೆ ಯಾರೂ ಇರಲಾರರು. ಅವನಲ್ಲಿ ಶಾಸ್ತ್ರದಲ್ಲಿ ಹೇಳಿದ ಬಹುತೇಕ ಸಾತ್ವಿಕ ಗುಣಗಳು ಇವೆ. ಇಂಥವರು ಇರಲು ಹೇಗೆ ಸಾಧ್ಯ ? ಸ್ವಲ್ಪು ವಿವೇಚನೆ ಮಾಡಬೇಕು. ಇಂಥ ಶ್ರೇಷ್ಠತೆ ಮೋದಿಯಲ್ಲಿ ಬರಲು ಏನು ಕಾರಣವಿರಬಹುದು ?

ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ. ಆದರೆ ದೇಶಕ್ಕೆ ಆಪತ್ತು ಬಂದಾಗ ಭಗವಂತನು ಯಾವ ದೇವತೆಗಳನ್ನಾದರೂ ಕಳಿಸಬಹುದು. ನಮ್ಮ ಸಿಧ್ಧಾಂತ ಉಳಿಯಲು ವಾಯುದೇವರ ರೂಪದಲ್ಲಿ ಶ್ರೀಮದಾಚಾರ್ಯರು ಅವತಾರ ಮಾಡಲಿಲ್ಲವೇ ? 

ಹಾಗೆ ಮೋದಿಯಲ್ಲಿ ಯಾವದಾದರೂ ದೇವತೆಗಳ ಆವೇಶ ಬೇಕು. ಇಲ್ಲದಿದ್ದರೆ ಇಷ್ಟು ಪ್ರಸಿಧ್ಧಿ ಬರಲು ಹೇಗೆ ಸಾಧ್ಯ. ಇದರ ಹಿಂದೆ ಮುಖ್ಯವಾದದ್ದು ಅವರಲ್ಲಿರುವ ಭಗವಂತನ ವಿಭೂತಿ ರೂಪ. ಆ ದೇವತೆಯದ್ವಾರಾ ಭಗವಂತನ ಸನ್ನಿಧಾನ ಅಲ್ಲಗಳಿಯುವಂತಿಲ್ಲ. ಮೋದಿಯ ಶರೀರದಲ್ಲಿ ದೇವತೆಯ ಆವೇಶ ಹಾಗೂ ಭಗವಂತನ ವಿಶೇಷ ಸಾನಿಧ್ಯ ಇರಲೇಬೇಕು.

ವಿಭೂತಿ ಸಂಧಿಯಲ್ಲಿ ದಾಸರು ಸ್ಪಷ್ಟವಾಗಿ ಹೇಳಿದ್ದಾರೆ. ಅರ್ಜುನನಿಗೆ ಸಾಕ್ಷಾತ್ ಶ್ರೀಕೃಷ್ಣನೇ ಉಪದೇಶಕನಾಗಿ  ದೇಶವನ್ನು ಗೆಲ್ಲಲು ಸಾಧ್ಯವಾಗಲಿಲ್ಲವೆ ? 

ಭಗವಂತನ ಸನ್ನಿಧಾನದಿಂದಲೇ ಮೋದಿಗೆ ಇಂಥ ಶ್ರೇಷ್ಠತೆ ಬಂದಿರಲೇಬೇಕು. ಇದು ನಮ್ಮ ಸೌಭಾಗ್ಯ. ರಾಜರಲ್ಲಿ ಭಗವಂತನು ಇಂಥ ಶಕ್ತಿ ಕೊಟ್ಟಿರುತ್ತಾನೆ. ನಮ್ಮ ದೇಶವನ್ನು ಆಳುವ ರಾಜನು ಅವನೇ ಆಗಿದ್ದಾನೆ.  ನಾವೆಲ್ಲರೂ ರಾಜನಿಗೆ ವಿಶೇಷ ಶಕ್ತಿ ಕೊಟ್ಟು ದೇಶವನ್ನು  ಕಾಪಾಡಲಿ ಎಂದು ದೇವರಲ್ಲಿ ಕಿಂಚಿತ್ ಪ್ರಾರ್ಥಿಸೋಣ".


ನನ್ನ ಅಮ್ಮ

 

                                        ನನ್ನ ಅಮ್ಮ

        ಅಮ್ಮ ಎಂದೊಡನೆ ಹೊತ್ತು ಹೆತ್ತು ಸಾಕಿ ಸಂಸ್ಕಾರ ಕೊಟ್ಟವರೆಂಬ ಪೂಜ್ಯ ಭಾವ ಎಲ್ಲರಿಗೂ ಬಂದುಬಿಡುತ್ತದೆ. ಕೆಲವು ಅನುಭವಗಳಿಂದ ,ಕೆಲವು ಓದಿನಿಂದ  ಮತ್ತೆ ಕೆಲವು ಅಪ್ಪ ದೊಡ್ಡಪ್ಪ ಮಾವ ಇಂತಹವರು ಹೇಳಿದ್ದರಿಂದ ಈ ಭಾವ ಬೆಳೆದು ಬರುತ್ತದೆ. ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ತಾಯಿಗೆ ಹೀಗೆ ಮಹತ್ವದ ಸ್ಥಾನ ಪೂಜ್ಯ ಭಾವ ಇರುವುದು ಸಹಜ.

        ನನ್ನ ಅಮ್ಮ  ನನಗೇನು ಮಾಡಿದರು? ಇದೆಂತಹ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ. ಅಮ್ಮ ನನ್ನನ್ನು ಅವರು ಹೋದಲ್ಲೆಲ್ಲ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.  ಪಕ್ಕದ ಸೀತೂರಿಗೆ, ಹತ್ತಿರದ ಶೃಂಗೇರಿಗೆ, ಅಜ್ಜಿಮನೆ ಗಾಜನೂರಿಗೆ ಹೀಗೆ ಹಲವು ಕಡೆ. ಆದರೆ ಅಲ್ಲಿಗೆಲ್ಲ ಅಮ್ಮನನ್ನು ನಾನು ಕರೆದುಕೊಂಡು ಹೋಗುತ್ತಿದ್ದೆನೆಂದೇ ಲೆಕ್ಕ. ಏಕೆಂದರೆ ನಾನು ಗಂಡಲ್ಲವೆ? ಹೋದಲ್ಲೆಲ್ಲ ನಾನು ಖುಶಿಯಾಗಿರುವಂತೆ ಅಮ್ಮ ನೋಡಿಕೊಳ್ಳುತ್ತಿದ್ದಳು.

        ಇಂತಹವೆಲ್ಲ ಬಿಡಿ ಎಲ್ಲ    ತಾಯಂದಿರೂ ಮಾಡುವುದೇ. ವಿಶೇಷವಾದ ಸಂದರ್ಭವೊಂದಿದೆ . ಹಲವು ಇವೆ ಆದರೆ ಈಗ ಪ್ರಸ್ತುತವಾಗಿರುವುದೊಂದು. ನಾನು ಕೊಪ್ಪದ ಪ್ರೌಢ ಶಾಲೆಗೆ ಹೋಗುತ್ತಿದ್ದ ದಿನಗಳು. ನಮ್ಮ ಶಾಲೆ ಪಿ ಯು ಕಾಲೇಜಾಗಿ ಉನ್ನತಿ ಹೊಂದಿತು. ಸ್ಥಳಾವಕಾಶ ಕಡಿಮೆ ಎಂದು ನಮಗೆ ಶಿಫ್ಟ್‌ ಕ್ಲಾಸುಗಳು ಪ್ರಾರಂಭವಾದುವು. ಪ್ರೌಢ ಶಾಲಾವಿಭಾಗಕ್ಕೆ ಬೆಳಗಿನ ಶಿಫ್ಟ್.‌ ಪಿ ಯು ವಿಭಾಗಕ್ಕೆ ಮಧ್ಯಾಹ್ನ. ಬೆಳಿಗ್ಗೆ ಏಳುವರೆ ಘಂಟೆಗೆ ಶಾಲೆಯಲ್ಲಿರಬೇಕಾಗಿತ್ತು. ಆಗ ಕೊಪ್ಪಕ್ಕೆ ಅಷ್ಟು ಹೊತ್ತಿಗೆ ಹೋಗುವಂತಹ ಬಸ್ಸಿರಲಿಲ್ಲ, ಆರು ಘಂಟೆಗೆ  ಮೊದಲೇ ಹೊರಟು ನಡೆದುಕೊಂಡೇ ಹೋಗಬೇಕಾಗಿತ್ತು. ಬೆಳಗಿನ ತಿಂಡಿ ಏನು?  ಹಿಂದಿನ ದಿನ ರಾತ್ರಿ ಸ್ವಲ್ಪ ಅನ್ನ ಉಳಿಸಿ, ಬೆಳಿಗ್ಗೆ ಅದನ್ನು ಬಿಸಿ ಮೊಸರನ್ನ ಮಾಡಿ ಕೊಡುತ್ತಿದ್ದಳು. ಒಂದು ದೊಡ್ಡ ಸೌಟನ್ನು ಒಲೆಯ ಉರಿಯಲ್ಲಿ ಕೆಂಪಗೆ ಕಾಯಿಸಿ ಅದಕ್ಕೆ ಸ್ವಲ್ಪ ಬೆಣ್ಣೆ ಹಾಕುವುದು ಅನಂತರ ಕಲಸಿದ ಮೊಸರನ್ನವನ್ನ ಅದಕ್ಕೆ ಹಾಕಿ ಮತ್ತೊಮ್ಮೆ ಕಲಸುವುದು - ಹೀಗೆ ಸಿದ್ಧವಾಗುತ್ತುತ್ತು ರುಚಿಯಾದ ಬಿಸಿ ಮೊಸರನ್ನ. ಬೆಳಿಗ್ಗೆ ಎದ್ದಾಗ ಚಳಿ ಚಳಿ ಎನಿಸಿದಾಗಲೂ ಸ್ನಾನ ಮುಗಿಸಿ ಈ ಅದ್ಭುತ ತಿಂಡಿಯನ್ನುತಿಂದರೆ ಆಹ್ಲಾದವಾಗುತ್ತಿತ್ತು. ನನಗೆ ಆಗ ಉದ್ದ ಕೂದಲಿತ್ತು. ನನಗೆ ಚೌಲ ಮಾಡಿರಲಿಲ್ಲವಾದ್ದರಿಂದ ‌. ಕೂದಲನ್ನು ಬಾಚಿ ಹಿಂಬದಿಯಲ್ಲಿ ಗಂಟುಹಾಕುತ್ತಿದ್ದಳು. ಒಗೆದ ಬಟ್ಟೆ ತೊಡಲು ಕೊಡುತ್ತಿದ್ದಳು.......

        ಅನಂತರ ಅಪ್ಪನ ಕೆಲಸ. ನಾನು ಮನೆಯಿಂದ ಐದುವರೆಗೆ ಹೊರಡುತ್ತಿದ್ದೆ. ಆಗಿನ್ನೂ ಪೂರ್ಣ ಬೆಳಕು ಹರಿದಿರುತ್ತಿದ್ದಿಲ್ಲ. ಬೆಳಕಾಗುವ ತನಕ ನನ್ನೊಡನೆ ಅವರು ನಡೆಯುತ್ತಿದ್ದರು. ಅನಂತರ ನಾನು ಶಾಲೆಕಡೆಗೆ ನಡೆಯುತ್ತಿದ್ದೆ ;ಅವರು ಮನೆಯ ಕಡೆಗೆ.

        ಕೆಲವೊಮ್ಮೆ ಮಳೆಗಾಲದಲ್ಲಿ ದಾರಿಯಲ್ಲಿ ಮಳೆಗೆ ಸಿಲುಕಿ ನೆನೆದುಕೊಂಡು ಬರುತ್ತಿದ್ದೆ. ಅಮ್ಮ ತಲೆಯನ್ನು ಮೈಯನ್ನು ಒರೆಸಿ ಅಪ್ಪಿ ಬೆಚ್ಚಗೆ ಮಾಡುತ್ತಿದ್ದಳು. 

        ನಾನು ಅಮ್ಮನೊಡನೆ ಜಗಳವಾಡುತ್ತಿದ್ದೆ ಆಟವಾಡುತ್ತಿದ್ದೆ. ಅಮ್ಮ ಕೆಲಸ ಹೇಳಿದಾಗ ಕೆಲವು ಸಲ ಮಾಡುತ್ತಿದ್ದೆ.

    ಅಮ್ಮ ಮೊನ್ನೆ ಮನೆಗೆ ಬಂದಿದ್ದಳು. ರೂಪಕ್ಕ ಮುರಳಿ ಜೊತೆಗೆ. ಇಂತಹ ನೆನಪುಗಳು ಮೇಲೆದ್ದು ಬಂದವು. ನನ್ನ ಸಾಧನೆಗಳನ್ನು ಅಮ್ಮನಿಗೆ ತೋರಿಸ ಬೇಕೆನಿಸಿತು. ನಾನು ಬರೆದ ಪುಸ್ತಕಗಳನ್ನೆಲ್ಲ ಒಂದೊಂದಾಗಿ ತೋರಿಸಿ ನನ್ನ ಆಸ್ತಿಯ ಹರವನ್ನು ಬಿಚ್ಚಿಟ್ಟೆ. ಖಶಿ ಪಟ್ಟಳು. ಆಶೀರ್ವದಿಸಿದಳು. ಅಮ್ಮ ಮತ್ತಷ್ಡು ಸಾಧನೆಗೆ ಆಶಿರ್ವಾದಿಸಿ ಮುನ್ನಡೆಸುತ್ತಿದ್ದಾಳೆ.

ನಮ್ಮ ರಾಮಚಂದ್ರಸ್ವಾಮಿಗಳು

ನಮ್ಮ ರಾಮಚಂದ್ರಸ್ವಾಮಿಗಳು

                                    ನಾನು ಕೊಪ್ಪದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದನಂತರ (1966) ಶೃಂಗೇರಿಯ ಶ್ರೀ ಜೆಸಿಬಿಎಮ್ ಕಾಲೇಜಿನಲ್ಲಿ ಪಿಯುಸಿಗೆ ನನ್ನನ್ನು ಸೇರಿಸಿದರು. ಆಗ ಕೆ ಬಿ ರಾಮಕೃಷ್ಣರಾವ್ ಎಂಬ ವಿದ್ವಾಂಸರು ಅಲ್ಲಿ ಪ್ರಿನ್ಸಿಪಾಲರಾಗಿದ್ದರು. ದೇಜಗೌ ಅವರು ಒಂದು ಸಭೆಯಲ್ಲಿ ನಮ್ಮ ಪ್ರಿನ್ಸಿಪಾಲರ ವಿದ್ವತ್ತನ್ನು ಹೊಗಳಿ ದೀಪದ ಕೆಳಗೆ ಕತ್ತಲೆ ಇದ್ದು ಅವರ ಪಾಂಡಿತ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶೃಂಗೇರಿ ನೋಡಿರುವುದಕ್ಕಿಂತ ಹೆಚ್ಚು ರಾಜ್ಯದ ಇತರೆಡೆಗಳಲ್ಲಿ ಗುರುತಿಸಲಾಗಿದೆಯೆಂದು ಸೂಚಿಸಿದ್ದರು. ಅನಂತರ ಕೆಬಿಆರ್ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಂದೂ ದರ್ಶನಶಾಸ್ತ್ರದ ಪ್ರೊಫೆಸರರಾಗಿದ್ದರು. ಪ್ರಧಾನ ಗುರುದತ್ತ ಇವರು ಆಗ ನಮಗೆ ಕನ್ನಡದ ಪ್ರಾಧ್ಯಾಪಕರಾಗಿದ್ದರು.ಒಳ್ಳೆಯ ಸ್ಫೂರ್ತಿದಾಯಕ ಪಾಠವನ್ನು ಅವರಿಂದ ಕೇಳಬೇಕು . ನಮಗೆ ಇವರೆಲ್ಲ ಸ್ಫೂರ್ತಿ ತುಂಬಿದವರು.
                                    ನಮಗೆ ರಾಮಚಂದ್ರ ಸ್ವಾಮಿಗಳು ಕೆಮಿಸ್ಟ್ರಿ ಪ್ರಾಧ್ಯಾಪಕರು ಇವರು ನಮ್ಮ ವ್ಯಕ್ತಿತ್ವವನ್ನೇ ಕಟ್ಟಿ ನಮ್ಮನ್ನು ಬೆಳೆಸಿದವರು. ಮನೆಗೆ ಹೋದಾಗಲೆಲ್ಲ ತಿಂಡಿ ತೀರ್ಥಗಳೂ ಇರುತ್ತಿದ್ದವು. ಒಮ್ಮೊಮ್ಮೆ ಉಠವೂ ಇರುತ್ತಿತ್ತು. ಆದರೆ ಇದನ್ನೆಲ್ಲ ಮೀರಿದ್ದು ಅವರ ಪ್ರೀತಿ ಮತ್ತು ಬೌದ್ಧಿಕ ಆಹಾರ. ನನಗೆ ಗೀತೋಪನಿಷತ್ತುಗಳ ಬಗ್ಗೆ ಅಭಿಮಾನ ಮೂಡಿಸಿದ್ದು ರಾಮಚಂದ್ರಸ್ವಾಮಿಗಳು. ರಾಮಕೃಷ್ಣಾಶ್ರಮದ ಬಗ್ಗೆ ವಿವೇಕಾನಂದರ ಬಗ್ಗೆ ತಿಳಿವಳಿಕೆ ಮೂಡಿಸಿದ್ದು,ಪ್ರೀತಿ ಬೆಳೆಸಿದ್ದು ಇವರೇ. ಕಲಾತ್ಮಕವಾಗಿ ಅಕ್ಷರಗಳನ್ನು ಬರೆಯಲು ಕಲಿಸಿದವರು ಇವರು. ರಸಾಯನ ಶಾಸ್ತ್ರ ಪ್ರಯೋಗಗಳನ್ನು ಮಾಡುವಾಗ ವಹಿಸ ಬೇಕಾದ ಎಚ್ಚರ ಚಚ್ಚರಗಳನ್ನು ಮೂಡಿಸಿದವರು ಇವರು. ಸಾಹಿತ್ಯಾಭಿಮಾನವನ್ನು ಬೆಳೆಸಿದವರೂ ಇವರೇ. ಎಮ್‌ ಎ ಅಧ್ಯಯನ ಮಾಡುತ್ತಿದ್ದಾಗ ನಮ್ಮ ಪ್ರೊಫೆಸರರ ಬಗ್ಗೆ ವಿಶೇಷ ಗೌರವದ ಮಾತುಗಳನ್ನಾಡಿ ಅವರ ಮಾರ್ಗದರ್ಶನವನ್ನು ಘನತರವಾಗಿ ಪಡೆದು ಅನುಸರಿಸಿದಂತೆ ಮಾಡಿವರೂ ಇವರೇ. 
                            ಕಾಲೇಜಿನಲ್ಲಿ ಕೆಮಿಸ್ಟರಿ ಕಲಿಸಿ ಮನೆಗೆ ಹೋಗಿ ಆರಾಮ ಮಾಡುತ್ತಿದ್ದವರಲ್ಲ ಅವರು. ಮಲೆನಾಡಿನ ಮಣ್ಣಿನ ವಿಶೇಷತೆಗಳನ್ನು ಅಧ್ಯಯನ ಮಾಡಿ ಪ್ರಕಟಿಸಿದವರೂ ಹೌದು.
                            ಎಲ್ಲ ರೀತಿಯಿಂದಲೂ ನಮಗೆ ಆದರ್ಶಪ್ರಾಯರಾದವರು, ಕೆಮಿಸ್ಟ್ರಿ ಅಧ್ಯಯನ ಮುಂದುವರೆಸಲು ನಿಗದಿತ ಅರ್ಹತೆ ಹೊಂದಲಾಗದಾ ನಾನು ಸಾಹಿತ್ಯ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿದವರು ಅವರು. ನನಗೆ ಅವರೆಂದಿಗೂ ಮರೆಯಲಾಗದ ಮಾಶ್ಟ್ರು.

ಪ್ರಭಾವಗಳು




‌                                           ಪ್ರಭಾವಗಳು

ನಾವು ಯಾರುಯಾರಿಂದ ಹೇಗೆ ಪ್ರಭಾವಿತಾಗುತ್ತೇವೆ ಎಂಭುದೊಂದು ವಿಚಿತ್ರ. ಈದಿನ ನೋಡಿ. ನಾವು ಅಂದರೆ ನಾನು ಮತ್ತು ಇವಳು ಒಂದು ಊಟದ ಮನೆಗೆ ಹೋಗಿದ್ದೆವು. ಸಂದರ್ಭವೇನೂ ಸಂಭ್ರಮ ಪಡುವಂತಹುದಲ್ಲ ಬಿಡಿ. ಇವಳ ದೊಡ್ಡಪ್ಪನ ಸೊಸೆಯ ಮೃತ ವರ್ಷಾಂತಿಕ. ಅಂತೂ ಸಂಬಂಧಿಗಳನೇಕರ ಭೇಟಿಯಾಯಿತು.ಕುಶಲೋಪರಿಗಳು ವಿನಿಮಯವಾಯಿತು. ಸಂಭ್ರಮವಲ್ಲದಿದ್ದರೂ ಸಂತೋಷದ ಅಲೆ ಮನಸಿನಲ್ಲಿ ಬಂದುದು ಸುಳ್ಳಲ್ಲ. ಸಂಜೆ ಏಳು ಗಂಟೆಯಾಗಿರಬಹುದು.
ನಾವು ವಾಸವಾಗಿರುವುದು ಒಂದು ಫ್ಲಾಟಿನಲ್ಲಿ. ಅದೂ ನೆಲಸಮಕಟ್ಟಿನಲ್ಲಿ. ಇದು ನಲವತ್ತು ಫ್ಲಾಟುಗಳಿರುವ ಅಪಾರ್ಟ್ಮೆಂಟಾಗಿದ್ದು ನಮ್ಮ ಮನೆಯ ಮೇಲುಗಡೆ ಮೊದಲನೆಯ ಮಹಡಿಯಲ್ಲಿಯೂ ಒಂದು ಮನೆ ಇದೆ. ಅವರದು ಎರಡು ಮಕ್ಕಳು ಅವರ ತಂದೆ ತಾಯಿ, ಮಕ್ಕಳ ಅಜ್ಜಿ ಇರುವ ಕುಟುಂಬ. ಮನೆಯಲ್ಲಿದ್ದಷ್ಟೂ ಹೊತ್ತು ಮಕ್ಕಳು ಕುಣಿದಾಡುವುದು ಫುಟ್‌ ಬಾಲ್‌ ಆಡುವುದು ವಸ್ತುಗಳನ್ನು ಬೀಳಿಸುವುದು, ವಸ್ತುಗಳನ್ನು ಎಳೆದಾಡುವುದು ನಡೆಸಿಯೇ ಇರುತ್ತಾರೆ. ಇಂದು ನನಗೂ ನನ್ನವಳಿಗೂ ವಾದ ಉಂಟಾದುದು ಈ ಕಾರಣಕ್ಕಾಗಿ. ನಮಗೆ ಪರಿಹರಿಸಿಕೊಳ್ಳಲು ಸಾಧ್ಯವಾದುದನ್ನು ಸಹಿಸಬೇಕು ಅಷ್ಟೆ ಎಂಬುದು ನನ್ನ ವಾದ; ಹಾಗಲ್ಲ ನಾವು ಅವರ ಮನೆಗೆ ಹೋಗಿ ನಮಗೆ ತೊಂದರೆಯಾಗುತ್ತಿದೆ ಹಾಗಾಗದಂತೆ ನಡೆದುಕೊಳ್ಳುವುದು ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವುದೂ ಅವರ ಜವಾಬ್ದಾರಿ ಎಂದು ಅವರಿಗೆ ಹೇಳ ಬೇಕೆಂಬುದೂ ಇವಳ ನಿಲುವು. ಪದೇ ಪದೇ ಈ ವಾದವನ್ನು ನನ್ನ ತಲೆಯೊಳಗೆ ತುರುಕಲು ಅವಳು ಇನ್ನಿಲ್ಲದ ಪ್ರಯತ್ನ ಮಾಡತೊಡಗಿದಾಗ ಈ ಕೂಡಲೇ ಹೋಗಿ ಅವರೊಡನೆ ಜಗಳ ಮಾಡಿಬರೋಣವೆನ್ನುವಷ್ಟು ಉತ್ತೇಜಿತನಾದೆ.
ಪ್ರಭಾವ ಹೇಗೆ ಉಂಟಾಗುತ್ತದೆ ನೋಡಿ. ವರ ಮನೆಗೆ ಇಬ್ಬರೂ ಹೋದೆವು ಆದರೆ ಜಗಳಾಡಲಿಲ್ಲ. ಮಕ್ಕಳಿಗೆ ಒಂದೊಂದು ಗಿಫ್ಟ್‌ ಕೊಟ್ಟು ಸ್ವಲ್ಪ ಬುದ್ಧಿ ಹೇಳಿ ಮನೆಯವರಿಗೂ ಸಲಹೆ ಕೊಟ್ಟು ಬಂದೆವು. ಕಡೆಗೆ ನೋಡಿದರೆ ಪುನರಾಯನಮಃ ಕಪಿಃ. 
ತಡೆದುಕೊಳ್ಳುವುದೊಂದೇ ದಾರಿ.