Wednesday, 25 November 2015

ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ


                                        ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ

                      ಈ ದಿನದ (25-11-2015) ಪತ್ರಿಕೆ - ವಿಜಯವಾಣಿ - ಎರಡು ವಿಷಯಗಳಿಂದ ತುಂಬಿದೆ. ಮೊದಲನೆಯದಾಗಿ 'ಅಸಹಿಷ್ಣುತೆ', ಮತ್ತು ಎರಡನೆಯದು ಲೋಕಾಯುಕ್ತ ಭ್ರಷ್ಟಾಚಾರ ಮತ್ತು ಲೋಕಾಯುಕ್ತ ಪದಚ್ಯುತಿ ಬಗ್ಗೆ ನಡೆಯುತ್ತಿರುವ ರಾಜಕೀಯ.
                      ಈಚೆಗೆ  ಅಮೀರ್ ಖಾನ್ ಅಸಹಿಷ್ಣುತೆ ಚರ್ಚೆಗಿಳಿದು ಅನವಶ್ಯಕ ಗೊಂದಲವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದ್ದಾರೆಯೇ ಎನಿಸುತ್ತಿದೆ. ಯಾಕೆ ಹೀಗಾಗುತ್ತಿದೆ ಎಂಬುದು ನನ್ನಂತಹ ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ.ಪ್ರೇಮಶೇಖರ ಮತ್ತು ಸಜನ್ ಪೂವಯ್ಯ ಇವರ ಎರಡು ಲೇಖನಗಳು ಈ ವಿವಾದದ ಹೊಸ ಆಯಾಮಗಳನ್ನು ಪರಿಚಯಿಸುತ್ತವೆ. ಹಿಂದಿನ ಅವಧಿಗಳಲ್ಲಿಏನಕೇನಪ್ರಕಾರೇಣ ಸಂಪತ್ತನ್ನು ಗಳಿಸುವಲ್ಲಿ ಮತ್ತು ಪ್ರಸಿದ್ಧಿ ಗಳಿಸುವಲ್ಲಿ  ಸರಕಾರಗಳ ನೆರವು ಪಡೆಯುತ್ತಿದ್ದು ಈಗ ಅದರಿಂದ ವಂಚಿತರಾಗುತ್ತಿರುವವರು ಇಂತಹ ಹುನ್ನಾರದಲ್ಲಿ ತೊಡಗಿದ್ದಾರೆಂದು ಮೊದಲನೆಯ ಲೇಖನದಲ್ಲಿ ಪ್ರತಿಪಾದಿಸಿದ್ದರೆ, ಎರಡನೆಯದರಲ್ಲಿ ಅಮೆರಿಕದಲ್ಲೋ ಫ್ರಾನ್ಸ್ ದೇಶದಲ್ಲೋ ನಡೆದ ಭಯೋತ್ಪಾದನೆ ಮುಂಬೈ ಭಯೋತ್ಪಾದಕ ಧಾಳಿಗಿಂತ ಪ್ರಮುಖ ಸ್ಥಾನ ಪಡೆಯುವುದನ್ನೂ ಇದರಿಂದ ಭಾರತೀಯರಲ್ಲಿ ಉಂಟಾಗುತ್ತಿರುವ ಅಸಮಾಧಾನವನ್ನೂ ಸ್ಪಷ್ಟವಾಗಿ ಗುರುತಿಸಲಾಗಿದೆ. ವೈಯಕ್ತಿಕ ಲಾಭಾಲಾಭಗಳಿಂದ ಮೇಲೆದ್ದು ರಾಷ್ಟ್ರದ ಒಟ್ಟುಹಿತವನ್ನು ಚಿಂತಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಅಂತರರಾಷ್ಟ್ರೀಯವಾಗಿ ಕೂಡ ನ್ಯಾಯಪರ ನಿಲುವು ದೃಢವಾಗುವುದು ಇವುಗಳಿಂದ ಮಾತ್ರ ಅಸಹಿಷ್ಣುತೆ ಮತ್ತು ಅದರ ಉಗ್ರರೂಪವಾದ ಭಯೋತ್ಪಾದನೆ   ದೂರವಾಗಬಹುದು.
   ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಒಂದು ವಿಚಿತ್ರ ವಿದ್ಯಮಾನವಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪ್ರವೃತ್ತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಭ್ರಷ್ಟರಾಗಿ ಪದವಿಯಲ್ಲಿರುವವರನ್ನು ಪದಚ್ಯುತಿಗೊಳಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ  ಒಂದು ರಾಜಕೀಯ ಪಕ್ಷ ಒಬ್ಬರನ್ನು ಪದಚ್ಯುತಿಗೊಳಿಸಲು ಪ್ರಸ್ತಾವಿಸಿತೆಂದು ಇನ್ನೊಂದು ಪಕ್ಷ ಇನ್ನೊಬ್ಬರನ್ನು ಪದಚ್ಯುತಗೊಳಿಸಬೇಕೆಂಬ ಹಟಕ್ಕೆ ಬೀಳುವುದು ಸಂಸ್ತೆಯನ್ನು ರಾಜಕೀಕರಣಗೊಳಿಸುವುದು ಎಂತಹ ನಿರ್ಲಜ್ಜ ಕ್ರಮ!

No comments:

Post a Comment