ಪ್ರೀತಿಯ ಎಡ್ವರ್ಡ್ ನೊರೋನ್ಹಾ
ಏಕೋ ಈ ದಿನ ನೊರೋನ್ಹಾರ ನೆನಪು ತುಂಬ ಬಂತು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ನಾನು ಎಮ್ ಎ ಮಾಡುತ್ತಿದ್ದಾಗ ಎಡ್ವರ್ಡ್ ನೊರೋನ್ಹಾ ನನ್ನ ಸಹಪಾಠಿ. ನನಗಿಂತ ಆರು ವರ್ಷ ಹಿರಿಯರಾದರೂ ಉತ್ತಮ ಗೆಳೆಯ. ನಾನು ತುಂಬ ಸಂಪ್ರದಾಯಸ್ಥ ಬ್ರಾಹ್ಮಣ, ಅವರು ತುಂಬ ಸಂಪ್ರದಾಯಸ್ಥ ಕಥೋಲಿಕ. ಜೆಸೂಯಿಟ್ ಬ್ರದರ್ ಆಗಿದ್ದವರು. ನನ್ನ ವಾಸ್ತವ್ಯ ಮಂಗಳಾದೇವಿ ದೇವಸ್ಥಾನದ ಹಿಂದೆ ಇದ್ದ (ಈಗ ಪಾಯಿಂಗ್ ಗೆಸ್ಟ್ ಎನ್ನುವಂತಹ) ಮನೆಯಲ್ಲಿ, ಅವರದು ಸಂತ ಅಲಾಯ್ಶಿಯಸ್ ಚರ್ಚಿನಲ್ಲಿ. ನಾವು ಅಜಂತ, ಎಲ್ಲೋರಾ, ಮುಂಬೈಗಳಿಗೆ ಶೈಕ್ಷಣಿಕಪ್ರವಾಸ ಹೋದಾಗಲೂ ನಾವು ನಿಕಟ ಜೊತೆಗಾರರು. 1974ರಲ್ಲಿ ಬಹುಶಃ ನಾವು ಒಟ್ಟೊಟ್ಟಿಗೆ ಕೆಲಸ ಸೇರಿದೆವು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರು, ನಾನು ರಾಯಚೂರು ತಾಲ್ಲೂಕಿನ ಇಡಪನೂರಿನಲ್ಲಿ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ. ಅನಂತರ ನನ್ನುನ್ನು ಪಿ ಎಚ್ಡಿ ಮಾಡಲು ಪ್ರೇರೇಪಿಸಿದವರೂ ಅವರೇ, ಮಾರ್ಗದರ್ಶಿಸಿದವರೂ ಅವರೇ. ಶಾಸ್ತ್ರೀಯ ಪ್ರಬಂಧವೊಂದನ್ನು ಬರೆಯುವ ಕೌಶಲವನ್ನು ನಾನು ಅವರಿಂದ ಕಲಿತೆ. ನಾನು ಕನ್ಮನಡಕ್ಕೆ ಗೀತಾಂಜಲಿಯನ್ನು ಭಾಷಾಂತಿರಿಸಿದಾಗ ತುಂಬ ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿದವರು, ಅದಕ್ಕೆ ಮುನ್ನುಡಿಯ ತೋರಣ ಬರೆದವರು. ಮಹತ್ವಾಕಾಂಕ್ಷಿ. ಸಜ್ಜನ. ದಾರ್ಮಿಕ ಮನೋಭಾವದ ವ್ಯಕ್ತಿ. ನಿವೃತ್ತಿಯನಂತರ ಕೊಂಕಣಿ ಪ್ರಾಜಕ್ಟೊಂದಕ್ಕಾಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂಬಂಧ ಒಂದು ಸಲ ಮಂಗಳೂರಿನಿಂದ ಮೈಸೂರಿಗೆ ಹಿಂದಿರುಗುತ್ತಿದ್ದಾಗ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದರು. ಅಕ್ಟೋಬರ್ 8, 2009ರಂದು ನಿಧನ.